ಮಳಖೇಡ
ಕರ್ನಾಟಕ ರಾಜ್ಯದ ಗುಲ್ಭರ್ಗ ಜಿಲ್ಲೆಯ ಸೇಡಮ್ ತಾಲ್ಲೂಕಿನಲ್ಲಿ ಕಾಗಿಣಾ ನದಿ ದಡದಲ್ಲಿರುವ ಒಂದು ಪ್ರಸಿದ್ಧ ಐತಿಹಾಸಿಕ ಸ್ಥಳ. ಮಾನ್ಯಖೇಟ ಎಂಬುದು ಐತಿಹಾಸಿಕ ಹೆಸರು. ವಾಡಿ-ಸಿಕಂದರಾಬಾದ್ ರೈಲುಮಾರ್ಗದಲ್ಲಿದೆ. ಮೊದಲಿಗೆ ರಾಷ್ಟ್ರಕೂಟ ಸಾಮ್ರಾಜ್ಯದ, ಅನಂತರ ಕೆಲಕಾಲ ಕಲ್ಯಾಣದ ಚಾಳುಕ್ಯರ ರಾಜಧಾನಿಯಾಗಿತ್ತು. ಮಳಖೇಡದ ಮೊದಲ ಉಲ್ಲೇಖ ಮಳಕೇಟಕ ಎಂದು ಪೂಗವರ್ಮನ ಮೂಧೋಳ ತಾಮ್ರಶಾಸನದಲ್ಲಿ ಬಂದಿದೆ. ಚೋಳರು ಮಾನ್ಯಖೇಟವನ್ನು ಮುತ್ತಿ ಸೂರೆಗೊಂಡುದಾಗಿ ತಮ್ಮ ಪ್ರಶಸ್ತಿಗಳಲ್ಲಿ ಬರೆಯಿಸಿದ್ದಾರೆ. ಪ್ರಾಯಶಃ ಈ ಸಂದರ್ಭದಲ್ಲೇ ಚಾಳುಕ್ಯ ದೊರೆಗಳು ರಾಜಧಾನಿಯನ್ನು ಜಗದೇಕಮಲ್ಲನ (1014-42) ಕಾಲದಲ್ಲಿ ಮಾನ್ಯಖೇಟದಿಂದ ಸ್ಥಳಾಂತರಿಸಬೇಕು.

ಅರ್ವಾಚೀನ ಕೃತಿ ಹರಿಭದ್ರಸೂರಿಯ ಸಮ್ಯಕ್ತ್ವ ಸಪ್ತತಿ ಮಳಖೇಡ ಕ್ರಿ.ಶ.ಸು. 1ನೆಯ ಶತಮಾನದಿಂದಲೇ ಜೈನಧರ್ಮದ ಕೇಂದ್ರವಾಗಿತ್ತೆಂದು ತಿಳಿಸುತ್ತದೆ.  ಕಥಾಕೋಶ ಹಾಗೂ ಚರಿತಗ್ರಂಥಗಳು ಅಕಲಂಕ ಜೈನಮುನಿ ಈ ಸ್ಥಳದವನೆಂದು ಉಲ್ಲೇಖಿಸಿವೆ. ಕನ್ನಡದ ಮೊದಲ ಕವಿಚಕ್ರವರ್ತಿ ಪೊನ್ನ (ನೋಡಿ- ಪೊನ್ನ) 3ನೆಯ ಕೃಷ್ಣನ ಅಸ್ಥಾನದಲ್ಲಿದ್ದ. ಜ್ವಾಲಾಮಾಲಿನಿ ಕಲ್ಪ, ಶ್ರುತಾವತಾರ ಮೊದಲಾದವನ್ನು ರಚಿಸಿದ ಇಂದ್ರನಂದಿ ಮತ್ತು ಪ್ರಾಕೃತದ (ಅಪಭ್ರಂಶ) ಪ್ರಸಿದ್ಧ ಮಹಾಕವಿ  ಪುಷ್ಪದಂತ ರಾಷ್ಟ್ರಕೂಟ ಚಕ್ರವರ್ತಿಯ ಅಸ್ಥಾನದಲ್ಲಿದ್ದರು.

ಇಲ್ಲಿ ಜೈನಧರ್ಮಕ್ಕೆ ಸಂಬಂಧಿಸಿದ ಕೆಲ ಪಳೆಯುಳಿಕೆಗಳಿವೆ. ಅವುಗಳಲ್ಲಿ ನೇಮಿನಾಥ ಜಿನಾಲಯ  ಬಹು ಮುಖ್ಯವಾದ್ದು.  ಇದರ ವಾಸ್ತುಶಿಲ್ಪ ಶ್ರೇಷ್ಠ ಮಟ್ಟದ್ದು. ಇದು ಹಲವು ಬಾರಿ ಜೋರ್ಣೋದ್ಧಾರಗೊಂಡಿದೆ. ಪ್ರಾಕಾರದಲ್ಲಿ ಭವ್ಯವಾದ ಪಾಶ್ರ್ವನಾಥನ ಪ್ರತಿಮೆಯೊಂದಿದೆ.  ಇಲ್ಲಿಯ ಗರ್ಭಗೃಹದಲ್ಲಿರುವ ನೇಮಿನಾಥ ತೀರ್ಥಂಕರನ ಮೂರ್ತಿ ಬಲು ಸುಂದರವಾಗಿದೆ. ಭಗ್ನ ಕೋಟೆಯ ಅವಶೇಷಗಳೂ ಇಲ್ಲಿವೆ.

ಮಧ್ವಾಚಾರ್ಯರ ವೈóಷ್ಣವ ಭಕ್ತಿಸಂಪ್ರದಾಯದ ಉತ್ತರಾದಿಮಠದ ಗುರು ಪರಂಪರೆಯಲ್ಲಿಯ ಅಕ್ಷೋಭ್ಯ ತೀರ್ಥ ಹಾಗೂ ಅವರ ಶಿಷ್ಯ ಜಯತೀರ್ಥ ಯೋಗೀಂದ್ರರ ವೃಂದಾವನ (ಸಮಾಧಿ)ಗಳೂ ಇಲ್ಲಿವೆ.           
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ